ಉಡಗಳು, ಭಾರತದ

ಭಾರತದ ಸಾಮಾನ್ಯ ಉಡ: ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಉಡ. ವೆರೆನಸ್ ಬೆಂಗಾಲೆನ್ಸಿಸ್ ಇದರ ಶಾಸ್ತ್ರೀಯ ಹೆಸರು. ಭಾರತದಲ್ಲಿ ಎಲ್ಲ ಬಗೆಯ ಕಾಡು ಹಾಗೂ ಮರುಭೂಮಿಯಲ್ಲ್ಲಿ ಕಂಡುಬರುವ ಇದು ಸುಮಾರು 1.75 ಮೀ. ಉದ್ದ ಬೆಳೆಯುತ್ತದೆ. ಬಾಲವೇ ಸುಮಾರು ಒಂದು ಮೀ. ಉದ್ದ ಬೆಳೆಯುತ್ತದೆ. ಹಸಿರು ಅಥವಾ ಕಂದು ಬಣ್ಣದ ಉಡಕ್ಕೆ ಅಲ್ಲಲ್ಲಿ ಕಪ್ಪ ಚುಕ್ಕೆಗಳಿರುತ್ತದೆ. ಸುಲಭವಾಗಿ ಮರಹತ್ತಬಲ್ಲುದು ಮತ್ತು ಈಜಬಲ್ಲುದು. ಮಾಂಸಾಹಾರಿ ಸರಿಸೃಪ. ತಾನು ಹಿಡಿಯ ಬಲ್ಲ ಯಾವುದನ್ನಾದರೂ ತಿನ್ನುತ್ತದೆ. ಪಕ್ಷಿಗಳ ಮತ್ತು ಮೊಸಳೆಗಳ ಮೊಟ್ಟೆ, ಏಡಿ, ಸಣ್ಣ ಆಮೆ, ಕೀಟಗಳು ಹಾಗೂ ಪ್ರಾಣಿಗಳ ಅವಶೇಷ ಸಹ ಇದರ ಆಹಾರ ಪಟ್ಟಿಯಲ್ಲಿ ಸೇರಿದೆ. ಸಂತಾನೋತ್ಪತ್ತಿ ಸಮಯ ಏಪ್ರಿಲ್ ನಿಂದ ಅಕ್ಟೋಬರ್. ಹೆಣ್ಣು ಗುಳಿ ತೋಡಿ ಮೊಟ್ಟೆ ಇಡುವುದಾದರೂ ಕೆಲವೊಮ್ಮೆ ಗೆದ್ದಲಿನ ಹುತ್ತದಲ್ಲೂ ಮೊಟ್ಟೆ ಇಡುತ್ತದೆ. ಮರಿಯಾಗಲು ಇವು 8 ರಿಂದ 9 ತಿಂಗಳುಗಳ ಕಾಲ ತೆಗೆದುಕೊಳ್ಳುತ್ತದೆ. ಹೆಣ್ಣಿನ ದೇಹಗಾತ್ರವನ್ನು ಅವಲಂಬಿಸಿ 8-30 ಮೊಟ್ಟೆಗಳನ್ನು ಇಡುತ್ತದೆ.
ಮರುಭೂಮಿ ಉಡ: ಭಾರತದ ಮರುಭೂಮಿಯಲ್ಲಿ ಕಂಡುಬರುವ ಮರಳು ಬೂದು ಬಣ್ಣದ ಉಡ. ವೆರೆನಸ್ ಗ್ರೀಸಿಯಸ್ ಶಾಸ್ತ್ರೀಯ ಹೆಸರು. ಬಾಲ ದುಂಡಾಗಿರುವುದು ಇದರ ವಿಶೇಷ.

ಹಳದಿ ಉಡ: ಪಂಜಾಬಿನಿಂದ ಬಿಹಾರವೂ ಸೇರಿದಂತೆ ಪಶ್ಚಿಮ ಬಂಗಾಳದ ವರೆಗೆ ಕಂಡುಬರುವ ಉಡ. ವೆರೆನಸ್ ಫ್ಲಾವೆಸ್ಕೆನ್ಸ್ ಶಾಸ್ತ್ರೀಯ ನಾಮ. ಹಳದಿ ಅಥವಾ ಹಳದಿ ಮಿಶ್ರಿತ ಕಂದು ಬಣ್ಣದ ಉಡ. ಮಳೆಗಾಲದಲ್ಲಿ ಇದರ ಮೈಮೇಲಿನ ಪಟ್ಟೆಗಳು ನಿಚ್ಚಳವಾಗಿ ಕಾಣುತ್ತದೆ. ಇದರ ಕಡಿತ ವಿಷಕಾರಿ ಎಂದು ಹೇಳಲಾಗುತ್ತದೆ.
ನೀರಿನ ಉಡ: ಭಾರತದ ಉಡಗಳಲ್ಲೇ ದೊಡ್ಡದಾದ ನೀರಿನ ಉಡ; ಸುಮಾರು 2.5 ಮೀ ಉದ್ದ ಬೆಳೆಯುತ್ತದೆ. ವೆರನಸ್ ಸಾಲ್ವೇಟರ್ ಶಾಸ್ತ್ರೀಯ ಹೆಸರು. ಒರಿಸ್ಸ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ ಹಾಗೂ ಅಂಡಮಾನ್ ದ್ವೀಪಗಳಲ್ಲಿ ಕಂಡುಬರುತ್ತದೆ. ಭಾರತವಲ್ಲದೆ ಶ್ರೀಲಂಕಾದಲ್ಲೂ ಕಂಡುಬರುತ್ತದೆ. ಕಪ್ಪೆ ಹಾಗೂ ಮೊಟ್ಟೆಗಳು ಇದರ ಮೆಚ್ಚಿನ ಆಹಾರ. ನೀರಿನ ಉಡವಾದರೂ ಸುಲಭವಾಗಿ ಮರ ಹತ್ತುತ್ತದೆ. ದಡದಲ್ಲಿ, ಮರದ ಪೊಟರೆ ಅಥವಾ ಹುತ್ತದಲ್ಲಿ 25 - 30 ಮೊಟ್ಟೆಗಳನ್ನು ಇಡುತ್ತದೆ.							 			

(ಕೆ.ಎಸ್. ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ